ಚಾಚುತೊಲೆ ಸೇತುವೆ

ಎರಡು ದಂಡೆಗಳಿಂದ ಒಳಮುಖವಾಗಿ ಚಾಚಿಕೊಂಡಿರುವ ತೊಲೆಗಳ ಮುಕ್ತ ಕೊನೆಗಳು ಭದ್ರವಾಗಿ ಜೋಡಿಸಲ್ಪಟ್ಟಾಗ ಏರ್ಪಡುವ ಸೇತುವೆ (ಕ್ಯಾಂಟಿಲಿವರ್ ಬ್ರಿಜ್). ಬಾಹ್ಯವಾಗಿ ಹೇರಲ್ಪಟ್ಟ ತೂಕಗಳನ್ನು ಚಾಚು ತೊಲೆಗಳು ತಮ್ಮ ಮೇಲಿನ ಪದರದ ಬಾಗುವಿಕೆಯಿಂದ ಹೊರುತ್ತವೆ. ಇಂಥ ಒಂದು ಸೇತುವೆ ಹೊರಬೇಕಾದ ತೂಕವನ್ನು ಸರಿದೂಗಿಸಲು ಬೇಕಾಗುವ ಸ್ತಬ್ಧತೂಕಗಳನ್ನು ಚಾಚು ತೊಲೆಗಳ ಭದ್ರ ಕೊನೆಗಳಲ್ಲಿ ಹೇರಲಾಗಿರುತ್ತದೆ. ಎರಡು ಚಾಚು ತೊಲೆಗಳು ಎರಡೂ ಕಡೆಗಳಿಂದ ಪರಸ್ಪರ ಅಭಿಮುಖವಾಗಿ ಒಳ ಚಾಚಿದಾಗ ಆಧಾರರಹಿತ ಕೊನೆಗಳು ಕಮಾನಿನ ಮಧ್ಯಾಂತರದಲ್ಲಿ ನೇರವಾಗಿ ಜಾರುವ ಕೀಲಿನಿಂದ ಕೂಡಿರುತ್ತವೆ (ಚಿತ್ರ 1). ಅಥವಾ ಎರಡೂ ಚಾಚು ತೊಲೆಗಳು, ಚಿಕ್ಕ ತೂಗುಸೇತುವೆಯಂಥದರಲ್ಲಿ, ಸಾಧಾರಣ ಆಧಾರದಿಂದ ತೊಡಗಿ ಮುಕ್ತ ಕೊನೆಗಳಲ್ಲಿ ಆಧರಿತವಾಗಿರುತ್ತವೆ (ಚಿತ್ರ 2). ಆಧಾರಗಳಲ್ಲಿ ಹೆಚ್ಚಿನ ಬಗ್ಗುವ ಹೊರೆ ಉಂಟಾಗುವುದರಿಂದ ಚಾಚುತೊಲೆಗಳ ಆಳ ಆಧಾರ ಸ್ಥಳಗಳಲ್ಲಿ ಅತ್ಯಧಿಕವಾಗಿರುವುದು.

ಚಿತ್ರ-1

ಹೆಚ್ಚು ಅಂತರ ಸೇತುವೆ ಕಮಾನು ಇರುವೆಡೆ, ಮಧ್ಯಾಂತರ ಕಮಾನಿನ ಆಳ ಕಡಿಮೆ ಮಾಡುವ ಉದ್ದೇಶವಿರುವೆಡೆ, ಕೃತಕ ಜೋಡಣೆ ಅಸಾಧ್ಯವಾದೆಡೆ, ಮಿಥ್ಯಾ ಅಡಿಪಾಯದ ಸಂದರ್ಭವಿರುವೆಡೆಯಲ್ಲೆಲ್ಲ ಚಾಚುತೊಲೆ ಸೇತುವೆಗಳನ್ನು ರಚಿಸುತ್ತಾರೆ.

ಚಿತ್ರ-2

ಚಾಚುತೊಲೆ ಸೇತುವೆಗಳನ್ನು ಸಾಧಾರಣವಾಗಿ ಮೂರು ವಿಧವಾಗಿ ವಿಂಗಡಿಸಬಹುದು 1. ಒಂಟಿ ಚಾಚುತೊಲೆ ಸೇತುವೆ; 2 ಜೋಡಿ ಚಾಚುತೊಲೆ ಸೇತುವೆ; 3 ವಿಸ್ತøತ ಚಾಚುತೊಲೆ ಸೇತುವೆ.
1. ಒಂಟಿ ಚಾಚುತೊಲೆ ಸೇತುವೆ : ಒಂಟಿ ಚಾಚುತೊಲೆ ಸೇತುವೆ ಒಂದೇ ದಡದಿಂದ ಆಧಾರಿತವಾಗಿ ಹೊರಚಾಚಲ್ಪಟ್ಟಿರುವುದು. ಭದ್ರ ದಡಗಳಿಲ್ಲದಿರುವೆಡೆಗಳಲ್ಲಿ ಆಧಾರದಿಂದ ಹೊರದೂಡಲ್ಪಟ್ಟ ತೂಕವನ್ನು ಸರಿದೂಗಿಸುವ ಸಲುವಾಗಿ ಚಾಚುತೊಲೆಯ  ಮುಂದುವರಿದ ಬಾನೆಯಲ್ಲಿ ಕಲ್ಲು ಅಥವಾ ಮಣ್ಣು ತುಂಬಲ್ಪಡುವುದು. ಈ ಮುಂದುವರಿಕೆಗೆ ಅಡಗಿಸಲ್ಪಟ್ಟ ಸೇತುವೆ ಕಮಾನು ಎಂದು ಹೆಸರು. ಇಂಥ ಮಾದರಿಯನ್ನು ಒಂಟಿ ಕಮಾನು ಸೇತುವೆಯಲ್ಲಿ ಮಾತ್ರ ಬಳಸಬಹುದು. ಎರಡು ಒಂಟಿ ಚಾಚುತೊಲೆಗಳನ್ನು ಎರಡು ಎದುರು ದಂಡೆಗಳಿಂದ ಕೊನರುವೆಡೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವುದು.

ಚಿತ್ರ-3

2. ಜೋಡಿ ಚಾಚುತೊಲೆ ಸೇತುವೆ : ಜೋಡಿ ತೊಲೆಗಳು ಹೊರ ಚಾಚಲ್ಪಟ್ಟು ಸ್ತಬ್ಧತೂಕವನ್ನು ಸರಿದೂಗಿಸಲು ಸೇತುವೆ ಕಮಾನು ಅಂತರವನ್ನು ಎರಡೂ ಕಡೆಯ ಆಧಾರದಿಂದ ತುಂಬುತ್ತವೆ. ಸರಿದೂಗದ ಜೀವ ಹೊರೆ ಆಧಾರಗಳಲ್ಲಿ ಸರಿ ಹೊಂದುವ ಸ್ಥಿರತೆಯಿಂದಾಗಿ ಅಥವಾ ನಿರ್ಬಂಧವಿಲ್ಲದ ಕೊನೆಯಲ್ಲಿ (ಆರಿಸಿಕೊಂಡ ದಡಗಳ ಬಳಿ) ಸೂಕ್ತವಾದ ಲಂಗರು ಹಾಕುವಿಕೆಯಿಂದ ತೊಲನವಾಗುತ್ತದೆ. ಈ ತರಹ ಸೇತುವೆಗಳು ಅಧಿಕ ಕಮಾನು ಸೇತುವೆಗಳಿಗೆ ಒಪ್ಪುವುವು ಮತ್ತು ನಿರ್ದಿಷ್ಟವಾಗಿ ಉಕ್ಕಿನಿಂದ ನಿರ್ಮಿತವಾಗುವ ಅತ್ಯಂತ ಹೆಚ್ಚು ಅಂತರ ಕಮಾನು ಸೇತುವೆಗಳಲ್ಲಿ ಹೆಚ್ಚು ಉಪಯುಕ್ತವಾಗುವುವು. ಜೋಡಿ ಚಾಚುತೊಲೆ ಸೇತುವೆಗಳು ಸ್ವಯಂ ಅಂತರ್ಗತವಾದವಾದ್ದರಿಂದ ಇವುಗಳ ರಚನೆ ಮಿತವ್ಯಯದ್ದು.

ಚಿತ್ರ-4

3. ವಿಸ್ತøತ ಚಾಚುತೊಲೆ ಸೇತುವೆ : ಚಾಚುತೊಲೆಗಳ ವಿಸ್ತರಣೆ ಎರಡು ಅಥವಾ ಹೆಚ್ಚು ಆಧಾರಗಳ ಮೇಲೆ ಆನಿಸಿರಬಹುದು. ಬಹುಶಃ ಒಂಟಿಯಾಗಿಯೂ ಒಂದು ಕಡೆ ಆಧಾರದಿಂದ ಹೊರಚಾಚಿಯೂ ವಿಸ್ತರಿಸಬಹುದು. (ಚಿತ್ರ (1) ಚಿತ್ರ (4) ಅಥವಾ ವಿಸ್ತರಣೆ ಎರಡೂ ಕಡೆಯಿಂದ ಇರಬಹುದು (ಚಿತ್ರ (1) ಈ ವಿಧವಾದ ಸೇತುವೆ ಹೆಚ್ಚು ಮಿತವ್ಯಯಕಾರಿ ಮತ್ತು ದೃಢ. ಈ ತರದ ಸೇತುವೆಯಲ್ಲಿ ಪ್ರಬಲಿತ ಕಾಂಕ್ರೀಟನ್ನು ಉಪಯೋಗಿಸುತ್ತಾರೆ. ದಡದ ದಿಕ್ಕಿಗೆ ಚಾಚುವಿಕೆ ವಿಸ್ತರಿಸಿದಾಗ ದಡದ ಕೈ (ಚಿತ್ರ 4) ಏರ್ಪಡುತ್ತದೆ. ಆಗ ಸೇತುವೆಯ ಆನಿಕೆ ಅಗತ್ಯವಿರುವುದಿಲ್ಲ.
   (ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ